ಬೆಂಕಿ ಬಿದ್ದ ಬಯಲು

ಬೆಂಕಿ ಬಿದ್ದ ಬಯಲು

ಹೆಣ್ಣು ನಾಯಿ ಆಗಲೇ ಕೊಂದರು
ಮರಿಗಳಿನ್ನೂ ಉಳಿದಿವೆ – ಜನಪ್ರಿಯ ಗೀತೆ

‘ವಿವಾ ಪೆಟ್ರೋನಿಲೋ ಫ್ಲೋರೆಸ್! ಪೆಟ್ರೋನಿಲೋ ಘ್ಲೋರೆಸ್‍ಗೆ ಜಯವಾಗಲಿ’
ಕೂಗಿನ ದನಿ ಆಳ ಕಮರಿಯ ಗೋಡೆಗಳಿಗೆ ಬಡಿದು ಪ್ರತಿದನಿಸುತ್ತಾ ನಾವಿದ್ದ ಮೇಲಿನ ತುದಿ ತಲುಪಿತು. ಆಮೇಲೆ ಮಾಯವಾಯಿತು.

ಸ್ವಲ್ಫ ಹೊತ್ತು ಗಾಳಿ ಕೆಳಗಿನಿಂದ ಬೀಸುತ್ತಾ ಬಂಡೆಗಳ ಮಧ್ಯೆ ನೀರು ಏರುವ ಸದ್ದಿನ ಹಾಗಿದ್ದ ಮಾತುಗಳ ಕಲಮಲ ಸದ್ದನ್ನು ಹೊತ್ತು ತರುತಿತ್ತು.

ಇದ್ದಕಿದ್ದ ಹಾಗೆ, ಅದೇ ಜಾಗದಿಂದ, ಮತ್ತೊಂದು ಧ್ವನಿತಿರುಚು ಕಂದರದ ತಿರುವಲ್ಲಿ ತಿರುಗಿ ಎದುರು ಬದುರಿದ್ದ ಕಂದರದ ಗೋಡೆಗಳಿಗಪ್ಪಳಿಸಿ, ಮಿಕ್ಕೆಲ್ಲ ದನಿಗಳಿಗಿಂತ ಜೋರಾಗಿ ನಮ್ಮನ್ನು ಬಂದು ತಟ್ಟಿತು:

‘ವಿವಾ ಮೀ ಜನರಲ್ ಪೆಟ್ರೋನಿಲೋ ಫ್ಲೋರೆಸ್, ನಮ್ಮ ಜನರಲ್‍ಗೆ ಜಯವಾಗಲಿ’.

ಒಬ್ಬರ ಮುಖ ಒಬ್ಬರು ನೋಡಿಕೊಂಡವು.

ಲಾ ಪೆರ್ರಾ ನಿಧಾನವಾಗಿ ಎದ್ದ. ಬಂದೂಕಿನಿಂದ ಕಾರ್ಟಿಜ್ ತಗೆದು ಅಂಗಿಯ ಜೇಬಿನಲ್ಲಿಟ್ಟುಕೊಂಡ. ನಾಲ್ಕುಜನರ ಗುಂಪು ಇದ್ದಲ್ಲಿಗೆ ಹೋದ. ‘ಹಿಂದೆ ಬನ್ನಿ, ಹುಡುಗರಾ. ಯಾವ ಥರದ ಗೂಳಿಗಳ ಜೊತೆ ಯುದ್ಧ ಮಾಡುತಿದ್ದೇವೋ ಹೋಗಿ ನೋಡಿಕೊಂಡು ಬರೋಣ!’ ಅಂದ. ಬೆನವೈಡಿಸ್‍ನ ನಾಲ್ವರು ಅಣ್ಣತಮ್ಮದಿರು ಅವನ ಹಿಂದೆ ಬೆನ್ನು ಬಗ್ಗಿಸಿ ಅಡಗಿಕೊಂಡು ಸಾಗಿದರು. ಲಾ ಪೆರ್ರಾ ಮಾತ್ರ ನೆಟ್ಟಗೆ ನಡೆಯುತಿದ್ದ. ಅವನ ಬಡಕಲು ಮೈಯ ಅರ್ಧ ಭಾಗ ಬೇಲಿಯ ಮರೆಯನ್ನೂ ದಾಟಿ ಕಾಣುತಿತ್ತು.

ನಾವು ಅಲ್ಲೇ ಉಳಿದೆವು. ಅಲ್ಲಾಡಲಿಲ್ಲ. ಬೇಲಿಯಂಚಿನಲ್ಲಿ ಅಂಗಾತ ಮಲಗಿ ಇಗುವಾನಾಗಳ ಥರ ಬಿಸಿಲು ಕಾಯಿಸಿಕೊಳ್ಳುತಿದ್ದವು.

ಬೇಲಿ ಗೋಡೆ ಬೆಟ್ಟದ ತುದಿಯ ಅಂಚಿನ ಉದ್ದಕ್ಕೂ ಏರುತ್ತ ಇಳಿಯುತ್ತ ಹಾವಿನ ಹಾಗೆ ವಕ್ರವಾಗಿ ಸಾಗಿತ್ತು. ಅವರು, ಅದೇ ಲಾ ಪೆರ್ರಾ ಮತ್ತೆ ನಾಲ್ವರು ಕೂಡ ವಕ್ರಮಾರ್ಗದಲ್ಲಿ ತಟ್ಟಾಡುತ್ತ ಹೋಗುತಿದ್ದರು. ಕಣ್ಣಿನಿಂದ ಮರೆಯಾಗುವ ಮೊದಲು ನಮಗೆ ಹಾಗೆ ಕಂಡಿದ್ದರು. ನಾವು ಮತ್ತೆ ತಿರುಗಿ ನೋಡಿದಾಗ ತೀರ ಸ್ವಲ್ಪ ನೆರಳು ಕೊಡುವ ಚೀನಾ ಬೆರ್ರಿ ಮರದ ಕೊಂಬೆಗಳು ಕಂಡವು.

ವಾಸನೆ ಹಾಗಿತ್ತು: ಕೊಳತ ಚೀನಾಬೆರ್ರಿಗಳ ವಾಸನೆ ತುಂಬಿದ್ದ ಬಿಸಿಲಿನಲ್ಲಿ ಬೆಂದು ಹೋಗಿದ್ದ ನೆರಳು ಅದು.

ನಡುಹಗಲ ಜೋಂಪು ಒತ್ತರಿಸಿಕೊಂಡು ಬರುತಿತ್ತು.

ಕಮರಿಯ ಆಳದ ಗದ್ದಲ ಆಗೀಗ ಮೇಲದ್ದು ಬಂದು ನಮ್ಮ ಮೈ ಕಂಪಿಸುವ ಹಾಗೆ ಮಾಡಿ ನಿದ್ದೆಗೆ ಜಾರದಂತೆ ತಡೆಯುತಿತ್ತು. ಎಷ್ಟೇ ಕಿವಿಗೊಟ್ಟು ಆಲಿಸಿದರೂ ಬರಿಯ ಗದ್ದಲವಷ್ಟೇ ಕೇಳುತಿತ್ತು-ಕಲ್ಲು ಹಾದಿಯ ಮೇಲೆ ಸಾಗುವ ಬಂಡಿಗಳ ಗಡಗಡ ಮರ್‍ಮರ ಸದ್ದಿನಂಥ ಸದ್ದು.

ತಟ್ಟನೆ ಕೇಳಿಸಿತು. ಗುಂಡು ಹಾರಿದ ಶಬ್ದ. ಸೀಳಿ ಸೀಳಿ ಹಾಕಿದ ಹಾಗೆ ಆ ಸದ್ದನ್ನು ಕಮರಿ ಪ್ರತಿಧ್ವನಿಸಿತು. ಎಲ್ಲವೂ ಎಚ್ಚರವಾದವು. ನಾವು ನೋಡುತಿದ್ದ ಚೇನಾಬೆರ್ರಿ ಮರಗಳಲ್ಲಿ ಸುಮ್ಮನೆ ಆಡಿಕೊಂಡಿದ್ದ ಟೋಟೋಚಿಲೋ ಕೆಂಪು ಹಕ್ಕಿಗಳು ಮರ ಬಿಟ್ಟು ಹಾರಿದವು. ಮಧ್ಯಾಹ್ನದವರೆಗೂ ಮಲಗಿ ನಿದ್ದೆಮಾಡಿದ್ದ ಮಿಡತೆಗಳೂ ಎದ್ದು ಕಿಟಿಪಿಟಿ ಸದ್ದಿನಿಂದ ನೆಲವನ್ನೆಲ್ಲ ತುಂಬಿದವು.

‘ಏನದು?’ ನಿದ್ರೆಯಿಂದ ಅರ್ಧ ಮಂಕಾಗಿ ಎದ್ದಿದ್ದ ಪೆದ್ರೋ ಝಮೋರೋ ಕೇಳಿದ.

ಮಿಡತೆಗಳ ಸದ್ದು ನಾವು ಕಿವುಡಾಗುವಷ್ಟು ಹೆಚ್ಚಿತು. ಅವರು ಯಾವಾಗ ಕಾಣಿಸಿಕೊಂಡರೋ ಅದು ಗೊತೇ ಆಗಲಿಲ. ನಾವು ಊಹೆ ಕೂಡ ಮಾಡಿರದಿದ್ದ ಕ್ಷಣದಲ್ಲಿ ಅಲ್ಲೇ, ನಮ್ಮೆದುರಿನಲ್ಲೇ ನಿಂತುಬಿಟ್ಟಿದ್ದರು. ಅವರ ಯೂನಿಫಾರಮ್ ಮುದುರಿತ್ತು. ಅವರ ಪಾಡಿಗೆ ಅವರು ಹೀಗೇ ಹೋಗುತಿದ್ದಾರೆ, ಈಗ ಕಣ್ಣೆದುರಿಗೆ ಇರುವುದನ್ನ ನೋಡುತಿಲ್ಲ ಇನ್ನೇನೋ ಯೋಚನೆಯಲ್ಲಿದ್ದಾರೆ ಅನ್ನುವ ಹಾಗೆ ಕಾಣುತಿತ್ತು.

ನಮ್ಮ ರೈಫಲುಗಳ ಗುರಿಕಿಂಡಿಯ ಮೂಲಕ ಅವರನ್ನೆಲ್ಲ ನೋಡುತಿದ್ದವು.

ಮೊದಲು ಬಂದವರು ದಾಟಿ ಹೋದರು. ಆಮೇಲೆ ಬಂದವರೂ ಹೋದರು. ಆಮೇಲೆ ಮತ್ತೆ ಬಂದವರ ಮೈ ಬಾಗಿ, ದಣಿವಿನಿಂದ ಸೋತು ಸುಣ್ಣವಾಗಿದ್ದರು. ತೊರೆ ದಾಟಿ ಬರುವಾಗ ಯಾರೋ ಮುಖಕ್ಕೆ ನೀರು ಎರಚಿದ್ದರು ಅನ್ನುವ ಹಾಗೆ ಅವರ ಮುಖವೆಲ್ಲ ಬಿವರಾಗಿತ್ತು.

ಸುಮ್ಮನೆ ಹೋಗುತ್ತಲೇ ಇದ್ದರು.

ಸಿಗ್ನಲು ಬಂತು. ಲಾ ಪೆರ್ರಾ ಹೋಗಿದ್ದ ದಿಕ್ಕಿನಿಂದ ಸುದೀರ್‍ಘವಾದ್ ವಿಶಲ್ಲು. ಢಾಂ ಢಾಂ ಸದ್ದು ಕೇಳಿಸಿತು. ಆ ಸದ್ದು ಇಲ್ಲಿ ಮುಂದುವರೆಯಿತು.

ಸುಲಭದ ಕೆಲಸ. ರೈಫಲುಗಳ ಗುರಿಕಿಂಡಿಯಲ್ಲಿ ಅವರು ಇಡಿಯಾಗಿ ತುಂಬಿದ್ದರು. ಡ್ರಮ್ಮಿನಲ್ಲಿರುವ ಮೀನು ರಾಶಿಗೆ ಗುಂಡಿಟ್ಟ ಹಾಗೆ ಇತ್ತು. ಅವರೆಲ್ಲ ತಮಗೇ ಗೊತ್ತೂ ಆಗದೆ ಬದುಕಿನಿಂದ ಸಾವಿಗೆ ನೆಗೆದಿದ್ದರು.

ಹೀಗೇ ಬಹಳ ಹೊತ್ತು ಇರಲಿಲ್ಲ. ನಾವು ಮೊದಲನೆಯ ಸುತ್ತು, ಮತ್ತೆ ಎರಡನೆಯ ಸುತ್ತು ಗುಂಡು ಹಾರಿಸುವವರೆಗೆ ಹೀಗಿತ್ತು. ರೈಫಲಿನ ಗುರಿಕಿಂಡಿ ಈಗ ಖಾಲಿ ಖಾಲಿಯಾಗಿತು. ಅದರಲ್ಲಿ ನೋಡಿದರೆ ರಸ್ತೆ ಮಧ್ಯೆ ಯಾರೋ ಬಂದು ಎಸೆದು ಹೋದ ಹಾಗಿದ್ದ ತಿರುಚಿಕೊಂಡು ವಕ್ರವಾಗಿ ಬಿದ್ದಿದ್ದ ಹೆಣ ಕಾಣುತಿದ್ದವು. ಜೀವವಿದ್ದವರು ತಪ್ಪಿಸಿಕೊಂಡರು. ಮತ್ತೆ ಕಾಣಿಸಿಕೊಂಡರು. ಕಂಡರು. ಉಳಿಯಲಿಲ್ಲ.

ಮುಂದಿನ ಸುತ್ತಿನ ಗುಂಡು ಹಾರಿಸಲು ರೆಡಿಯಾಗಿದ್ದೆವು.

‘ವಿವಾ ಪೆದ್ರೋ ಝಮೋರಾ! ಪೆದ್ರೋ ಝಮೋರಾಗೆ ಜಯವಾಗಲೀ!’ ನಮ್ಮಲ್ಲಿ ಯಾರೋ ಕಿರುಚಿದರು.

ನಮ್ಮ ಜಯಕಾರಕ್ಕೆ ಪತ್ಯುತ್ತರ ಗುಟ್ಟಿನ ದನಿಯಲ್ಲಿ ಕೇಳಿಸಿತು, ‘ಕಾಪಾಡು ದೇವರೇ, ಕಾಪಾಡು ಸಂತ ನಿನೊ ಡಿ ಅಚೋಟ, ಕಾಪಾಡು.’

ಹಕ್ಕಿ ಹಾರಿದವು. ಥ್ರಶ್ ಹಕ್ಕಿ ಗುಂಪು ಗುಂಪಾಗಿ ಬೆಟ್ಟದ ದಿಕ್ಕಿಗೆ ಹಾರಿದವು.

ಗುಂಡಿನ ಮೂರನೆಯಸುತ್ತು ನಮ್ಮ ಬೆನ್ನಿನ ಕಡೆಯಿಂದ ಹಾರಿತು. ನಾವು ಬೆಲಿಗೋಡೆಯನ್ನು ಹಾರಿ, ನಾವು ಆಗಲೇ ಕೊಂದು ಬೀಳಿಸಿದ್ದವರನ್ನು ದಾಟಿ ಹೋದೆವು.

ಪೊದೆ ಪೊದರುಗಳಲ್ಲಿ ನುಗ್ಗಿ ಓಡಿದೆವು. ಬಂದೂಕಿನ ಗುಂಡುಗಳು ನಮ್ಮ ಪಾದಕ್ಕೆ ಕಚಗುಳಿ ಇಡುತಿದ್ದವು. ನಾವೆಲ್ಲ ಮಿಡತೆಗಳಿರುವ ಹೊಂಡಕ್ಕೆ ಬಿದ್ದ ಹಾಗೆ ಅನಿಸುತಿತ್ತು. ಆಗೀಗ ಅಲ್ಲ, ಮತ್ತೆ ಮತ್ತೆ ನಮ್ಮಲ್ಲೊಬ್ಬರಿಗೆ ಗುಂಡು ತಾಕಿ ಮೂಳೆ ಲಟಲಟಿಸುವ ಹಾಗೆ ನೆಲಕ್ಕೆ ಬೀಳುತಿದ್ದರು.

ಓಡಿದೆವು. ಕಮರಿಯ ಅಂಚಿಗೆ ತಲುಪಿದೆವು. ಬೇಲಿಯ ಗೋಡೆಯನ್ನು ಹಾರಿ ಜಾರಿದೆವು.

ಅವರು ಗುಂಡು ಹಾರಿಸುತ್ತಲೇ ಇದ್ದರು. ನಾವು ಕಮರಿಯ ತಳ ಮುಟ್ಟಿ, ಅಂಬೆಗಾಲಿಟ್ಟು ಇನ್ನೊಂದು ದಿಕ್ಕಿನಲ್ಲಿ ಮೇಲೇರಿ ತುದಿಯನ್ನು ತಲುಪಿದರೂ ಗುಂಡು ಹಾರಿ ಬರುತ್ತಲೇ ಇದ್ದವು.

‘ನಮ್ಮ ಜನರಲ್ ಪೆಟ್ರೊನಿಲೋ ಘ್ಲೋರೆಸ್‍ಗೆ ಜಯವಾಗಲಿ! ನಾಯಿ ನನ್ನ ಮಕ್ಕಳು!’ ನಮ್ಮ ಬೆನ್ನ ಹಿಂದಿನಿಂದ ಕೂಗುತಿದ್ದರು. ಬಿರುಗಾಳಿಯ ಸದ್ದಿನಲ್ಲಿ ಗುಡುಗು ಮರೆಯಾದ ಹಾಗೆ ಅವರ ಕೂಗು ಕಮರಿಯಲ್ಲಿ ಬಿದು ಮಾಯವಾಗುತಿತ್ತು.
* * *

ದೊಡ್ಡ ಬಂಡೆಗಳ ಹಿಂದೆ ಬಗ್ಗಿ ಅವಿತಿದ್ದೆವು. ನಮ್ಮ ಏದುಸಿರು ಇನ್ನೂ ನಿಂತಿರಲಿಲ್ಲ. ಪೆದ್ರೋ ಝಮೋರನನ್ನು ಸುಮ್ಮನೆ ದಿಟ್ಟಿಸಿದೆವು. ಇದೇನು ನಮ್ಮ ಗತಿ ಅನ್ನುವ ಪ್ರಶ್ನೆಯನ್ನು ನೋಟದಲ್ಲೇ ಕೇಳಿದೆವು. ಅವನೂ ಏನೂ ಹೇಳದೆ ಸುಮ್ಮನೆ ನಮ್ಮನ್ನೇ ನೋಡಿದ. ನಮಗೆಲ್ಲ ಮಾತಿನ ಶಕ್ತಿ ಉಡುಗಿದ ಹಾಗಿತ್ತು. ನಮ್ಮ ನಾಲಗೆ ಗಿಳಿಯ ನಾಲಗೆಯ ಹಾಗೆ, ಬಿಡಿಸಿಕೊಂಡು ನಡಿಯಲಾಗದಂತೆ ಇದ್ದವು.

ಪೆದ್ರೋ ಝಮೋರ ನಮ್ಮನ್ನೇ ನೋಡುತಿದ್ದ. ಕಣ್ಣಲ್ಲೆ ಎಣಿಕೆ ಮಾಡುತಿದ್ದ, ಅವನಿಗೆ ನಿದ್ರೆಯೇ ಬರುವುದಿಲ್ಲವೇನೋ ಅನ್ನಿಸುವಷ್ಟು ಕೆಂಪಗಿದ್ದವು ಅವನ ಕಣ್ಣು. ನಮ್ಮೊಬ್ಬೊಬ್ಬರನ್ನೂ ಕಣ್ಣಲೇ ಎಣಿಸಿದ. ನಾವೆಷ್ಟು ಜನ ಇದ್ದೇವೆ ಅನ್ನುವುದು ಅವನಿಗಾಗಲೇ ಗೊತ್ತಿತ್ತು. ಆದರೂ ಖಚಿತವಿಲ್ಲದವನ ಹಾಗೆ ಮತ್ತೆ ಮತ್ತೆ ಎಣಿಸುತ್ತಲೇ ಇದ್ದ.

ಕೆಲವರು ಕಾಣೆಯಾಗಿದ್ದರು. ಲಾ ಪೆರ್ರಾ, ಎಲ್ ಚಿಹೂಯ್ಲ ಮತ್ತವರ ಹಿಂದೆ ಹೋದವರನ್ನು ಬಿಟ್ಟು ಹನ್ನೊಂದೋ ಹನ್ನೆರಡೋ ಜನ ಕಾಣಲಿಲ್ಲ. ಚಿಚೂಲಿಯಾ ಯಾವುದೋ ಚೇನಾ ಬೆರ್ರಿ ಮರ ಹತ್ತಿ ಬಚ್ಚಿಟ್ಟುಕೊಂಡಿರಬಹುದು, ಬಂದೂಕಿನ ಹಿಂಬದಿಗೆ ತಲೆ ಆನಿಸಿಕೊಂಡು ಸರ್ಕಾರಿ ಸೃನಿಕರು ಹೋಗಲಿ ಅಂತ ಕಾಯುತ್ತಿರಬಹುದು.

ಹಿರಿಯ ಹೋಸೆ, ಕಿರಿಯ ಹೋಸೆ-ಲಾ ಪೆರ್ರಾನ ಇಬ್ಬರು ಗಂಡುಮಕ್ಕಳು- ಮೊದಲು ತಲೆ ಎತ್ತಿ ಆಮೇಲೆ ಪೂರಾ ಎದ್ದು ನಿಂತರು. ಆಮೇಲೆ ಪೆದ್ರೋ ಝಮಾರೋ ತಮಗೆ ಏನಾದರೂ ಹೇಳಲೆಂದು ಕಾಯುತ್ತಾ ಹಿಂದೆ, ಮುಂದೆ ಓಡಾಡಿದರು. ಅವನಂದ: ‘ಇನ್ನೊಂದು ಸಾರಿ ಹೀಗೆ ಕೈಮಿಲಾಯಿಸಿದರೆ ನಮ್ಮ ಕಥೆ ಮುಗಿದ ಹಾಗೆ.’

ಬಾಯಿ ತುಂಬ ಇರುವ ಕೋಪವನ್ನು ನಂಗಿಕೊಳ್ಳುತಿದ್ದಾನೆ ಅನ್ನುವ ಹಾಗೆ ಉಸಿರುಕಟ್ಟಿ ಹೋಸೆಗಳಿಗೆ ಹೇಳಿದ-‘ನಿಮ್ಮಪ್ಪ ಕಾಣತಾ ಇಲ್ಲ ಅನ್ನುವುದು ಗೊತ್ತು. ತಾಳಿ, ಸ್ವಲ್ಪ ತಾಳಿ. ಅವರ ಬೆನ್ನು ಹತ್ತೋಣ.’

ಶತ್ರುಗಳ ಬುಲೆಟ್ಟು ಹಾರಿ ಬಂತು. ನಮ್ಮೆದುರಿಗಿದ್ದ ಬೆಟ್ಟದ ಗೋಡೆಯ ಕಿಲ್‍ಡೀರ್ ಹಕ್ಕಿಗಳ ಗುಂಪು ಕೀರಲು ಸದ್ದು ಮಾಡುತ್ತ ಹಾರಿ ಹೋದವು. ಕಮರಿಗಿಳಿದವು, ಮತ್ತೆ ಮೇಲೇರಿ ನಮ್ಮ ತೀರ ಸಮೀಪಕ್ಕೆ ಬಂದು, ನಮ್ಮನ್ನು ಕಂಡು ಬೆದರಿ, ಹಿಂದಿರುಗಿ ಥಳಥಳ ಬಿಸಿಲಲ್ಲಿ ಅರ್ಧ ಪ್ರದಕ್ಷಿಣೆ ಹಾಕಿಕೊಂಡು ನಮ್ಮೆದುರಿನ ಇಳಿಜಾರಿನ ಮರದ ಕೊಂಬೆಗಳನ್ನು ಚೀರಾಟದಿಂದ ತುಂಬಿದವು.

ಹೋಸೆಗಳಿಬ್ಬರೂ ಮೊದಲಿದ್ದ ಜಾಗಕ್ಕೆ ಬಂದು ಕುಕ್ಕರುಗಾಲಲ್ಲಿ ಸದ್ದಿಲ್ಲದೆ ಕೂತರು.

ಇಡೀ ಮಧ್ಯಾಹ್ನ ಹೀಗೇ ಕಳೆದೆವು. ಕತ್ತಲಿಳಿಯುವ ಹೊತ್ತಿಗೆ ಎಲ್ ಚಿಹೂಯ್ಲ ಮತ್ತೆ ನಾಲ್ವರ ಗುಂಪಿನಲ್ಲಿ ಒಬ್ಬ ವಾಪಸು ಬಂದರು. ಕಮರಿಯ ಬುಡದಿಂದ, ಪಿಯಡ್ರಾ ಲೀಸಾದಿಂದ, ಬರುತಿದ್ದೇವೆ ಅಂದರು. ಆದರೆ ಸರ್ಕಾರಿ ಸೈನಿಕರು ಅಲ್ಲೇ ಇದ್ದಾರೋ, ಹೋಗಿದ್ದಾರೋ ಗೊತ್ತಿಲ್ಲ ಅಂದರು. ಎಲ್ಲವೂ ಶಾಂತವಾಗಿ ಇದ್ದಹಾಗಿತ್ತು. ಆಗೀಗ ತೋಳಗಳು ಊಳಿಡುವ ಸದ್ದು ಸೇಳುತಿತ್ತು.

ಪೆಡ್ರೋ ಝಮಾರೋ ನನ್ನ ನೋಡುತ್ತಾ ‘ಇಲ್ಲಿ ನೋಡು, ಪಿಚಾನ್. ನಿನಗೆ ಒಂದು ಕೆಲಸ. ಈ ಹೋಸೆಗಳನ್ನ ಕರೆದುಕೊಂಡು ಪಿಯೆಡ್ರಾ ಲೀಸಾಕ್ಕೆ ಹೋಗು. ಲಾ ಪೆರ್ರಾಗೆ ಏನಾಗಿದೆ ನೋಡಿಕೊಂಡು ಬಾ. ಅವನು ಸತ್ತಿದ್ದರೆ ಸಮಾಧಿಮಾಡು. ಯಾರು ಸತ್ತಿದರೂ ಅಷ್ಟೇ. ಗಾಯವಾದವರನ್ನ ಅಲ್ಲೇ ಬಿಟ್ಟು ಬಾ. ತಬ್ಬಲಿ ಪ್ರಾಣಿಗಳು ತಿಂದುಕೊಳ್ಳಲಿ. ಗಾಯವಾದವರನ್ನ ಕರಕೊಂಡು ಬರಬೇಡ,’ ಅಂದ.

‘ಸರಿ,’ ಅಂದೆ
ಹೊರಟೆವು.

ನಮ್ಮ ಕುದುರೆಗಳನ್ನು ಕಟ್ಟಿದ್ದ ಲಾಯದ ಹತ್ತಿರ ಹೋದ ಹಾಗೆ ತೋಳಗಳ ಕೂಗು ಹತ್ತಿರದಲ್ಲೇ ಕೇಳುತಿತ್ತು. ಕುದುರೆ ಒಂದೂ ಇರಲಿಲ್ಲ. ನಾವು ಅಲ್ಲಿ ಠಿಕಾಣಿ ಹಾಕುವ ಮೊದಲೇ ಇದ್ದ ಬಡಕಲು ಕತ್ತೆ ಮಾತ್ರ ಇತ್ತು. ಸರಕಾರೀ ಸೈನಿಕರು ಕುದುರೆಗಳನ್ನ ಕದ್ದಿದ್ದರು.

ನಾಕು ಜನರ ಗುಂಪಿನಲ್ಲಿ ಉಳಿದ ಮೂವರು ಅಲ್ಲೇ ಪೊದೆಗಳ ಹಿಂದೆ ಸಿಕ್ಕರು. ರಾಶಿ ಒಟ್ಟಿದ ಹಾಗೆ ಒಬ್ಬರ ಮೇಲೊಬ್ಬರು ಬಿದ್ದಿದ್ದರು. ಅವರ ಕೂದಲು ಹಿಡಿದು ತಲೆ ಮೇಲೆತ್ತಿ, ಮೈ ಅಲ್ಲಾಡಿಸಿ ಬದುಕಿದ್ದಾರೋ ಎಂದು ನೋಡಿದೆವು. ಎಲ್ಲ ಕಲ್ಲಿನ ಹಾಗೆ ಬಿದ್ದಿದ್ದ ಹೆಣಗಳು. ದೊಣೆಯ ಹತ್ತಿರ ನಮ್ಮವನಿನ್ನೊಬ್ಬ ಇದ್ದ. ಯಾರೋ ಕೊಡಲಿಯಲ್ಲಿ ಕಚ್ಚು ಮಾಡಿದ ಹಾಗೆ ಅವನ ಪಕ್ಕೆಲುಬು ಹೊರಕ್ಕೆ ಚಾಚಿಕೊಂಡಿತ್ತು. ಆ ಜಾಗ ಪೂರಾ ಹುಡುಕಿ ನೋಡಿದರೆ ಅಲ್ಲೊಬ್ಬ, ಇಲ್ಲೊಬ್ಬ ನಮ್ಮವನು ಕಂಡ. ಎಲ್ಲರ ಮುಖವೂ ಕಪಾಗಿತ್ತು.

‘ಅವರೇ ಎಲ್ಲಾರನ್ನೂ ಮುಗಿಸಿದ್ದಾರೆ. ಅನುಮಾನವೇ ಇಲ್ಲ,’ ಅಂದ ಒಬ್ಬ ಹೋಸೆ.

ಲಾ ಪೆರ್ರಾನ ಹುಡುಕಿದೆವು. ಆ ನನ್ನ ಮಗನನ್ನ ಹುಡುಕುವುದು ಬಿಟ್ಟರೆ ಬೇರೆ ಯಾವುದಕ್ಕೂ ಗಮನ ಕೊಡಲಿಲ್ಲ.

‘ಸರ್ಕಾರದ ಮುಂದೆ ಹಾಜರು ಮಾಡುವುದಕ್ಕೆ ಅವನನ್ನ ಹಿಡಿದುಕೊಂಡು ಹೋಗಿರಬೇಕು,’ ಅಂದುಕೊಂಡೆವು. ಆದರೂ ಕೂಳೆ ಹೊಲವನ್ನೂ ಬಿಡದೆ ಅವನನ್ನು ಹುಡುಕಿದೆವು. ತೋಳ ಊಳಿಡುತ್ತಲೇ ಇದ್ದೆವು.

ಇಡೀ ರಾತ್ರಿ ಊಳಿಟ್ಟವು.
* * *

ಕೆಲವು ದಿನಗಳಾದಮೇಲೆ ಅರ್ಮೇರಿಯದಲ್ಲಿ ನಾವು ನದಿ ದಾಟುತಿದ್ದಾಗ ಪೆಟ್ರೋನಿಲೋ ಫ್ಲೋರೆನ್ಸ್‍ನನ್ನು ಮತ್ತೆ ಎದುರಿಸಿದೆವು. ನಾವು ವಾಪಸ್ಸ್. ಆದರೂ ತಡವಾಗಿತ್ತು. ನಮ್ಮನ್ನೆಲ್ಲ ಮರಣದಂಡನೆಗೆ ಒಳಪಡಿಸುತಿದ್ದ ಹಾಗಿತು. ಪೆದ್ರೋ ಝಮಾರೋ ಮುಂದೆ ಸಾಗುತಿದ್ದ. ಮತ್ತೆ ನಾನೆಂದೂ ನೋಡದಂಥ ಜಾತಿ ಕುದುರೆ ಏರಿ ನಾಯಕನ ಹಾಗೆ ಮುಂದೆ ಹೋಗುತಿದ್ದ. ಅವನ ಹಿಂದೆ ಗುಂಪಾಗಿ ನಾವು. ಕುದುರೆಗಳ ಕುತ್ತಿಗೆ ಹಿಡಿದು, ಬಗ್ಗಿ ಕೂತು ಸಾಗುತಿದ್ದೆವು. ಆದರೂ ಕೊಲೆಗಡುಕತನದ ಹಬ್ಬವೇ ನಡದುಹೋಯಿತು. ಮೊದಮೊದಲು ನನಗದು ಗೊತ್ತಾಗಲಿಲ್ಲ. ಯಾಕೆಂದರೆ ನನ್ನ ಸತ್ತ ಕುದುರೆಯೊಡನೆ ನಾನೂ ನದಿಯಲ್ಲಿ ಮುಳುಗಿದ್ದೆ. ನದಿಯ ಸೆಳೆವು ನಮ್ಮಿಬ್ಬರನ್ನೂ ಎಳಕೊಂಡು ಹೋಗಿ ಮುಂದೆಲ್ಲೋ ಮರಳ ದಿಬ್ಬದ ಮೇಲೆ ಎಸೆದಿತ್ತು.

ಪೆಟ್ರೋನಿಲೋ ಫ್ಲೋರೆಸ್ ನಾಯಕತ್ವದ ಸರ್ಕಾರಿ ಸೈನದ ಜೊತೆ ನಾವು ಹೋರಾಡಿದ್ದು ಅದೇ ಕೊನೆ. ಆಮೇಲೆ ಯುದ್ಧ ಮಾಡಲೇ ಇಲ್ಲ. ಅಥವಾ ಇನ್ನೊಂದು ಥರ ಹೇಳುವುದಾದರೆ ನಾವು ಯುದ್ಧಮಾಡಿ ಎಷ್ಟೋ ಕಾಲ ಕಳೆದಿತ್ತು. ಕಾದಾಡುವ ಬದಲಾಗಿ ಕದನ ತಪ್ಪಿಸಿಕೊಳ್ಳುವುದಕ್ಕೆ ನೋಡುತಿದ್ದೆವು. ಅದಕ್ಕೇ ಉಳಿದುಕೊಂಡ ನಾವು ಪೂರಾ ನಾಶವಾಗಬಾರದೆಂದು ಕಾಡು ಸೇರಿದೆವು. ಹರಕು ಚಿಂದಿ ತೊಟ್ಟ ನಮ್ಮ ಗುಂಪನ್ನು ಕಂಡು ಯಾರೂ ಹೆದರುತ್ತಿರಲಿಲ್ಲ. ‘ಝಮಾರೋನ ಸೈನ್ಯ ಬರುತ್ತಾ ಇದೆ,’ ಅಂತ ಯಾರೂ ಕೂಗಿ ಹೇಳಿ ಹೆದರಿ ಓಡುತ್ತಿರಲಿಲ್ಲ. ಬಯಲು ನಾಡಿಗೆ ಶಾಂತಿ ಮರಳಿತ್ತು.
* * *

ಬಹಳ ಕಾಲ ಹೀಗಿರಲಿಲ್ಲ.

ಎಂಟು ತಿಂಗಳಷ್ಟು ಕಾಲ ನಾವು ಟೋಝಿನ್ ಕಗ್ಗಲ್ಲು ಕಣಿವೆಯಲ್ಲಿ ಅವಿತುಕೊಂಡಿದ್ದೆವು. ಅಲ್ಲೇ ಕೆಲವು ಗಂಟೆಗಳಷ್ಟು ಕಾಲ ಅರ್ಮೇರಿಯ ನದಿ ಸುತ್ತಿ ಸುತ್ತಿ ಸುಳಿದು ಆಮೇಲೆ ಕರಾವಳಿಯನ್ನು ಪ್ರವೇಶಮಾಡುತಿತ್ತು. ಓಂದೆರಡು ವರ್ಷ ಕಳಯಲಿ, ಜನ ನಮ್ಮನ್ನು ಮರೆಯಲಿ, ಆಮೇಲೆ ಲೋಕಕ್ಕೆ ಮರಳೋಣ ಅಂದುಕೊಂಡಿದ್ದೆವು. ಕೋಳಿ ಸಾಕುವುದಕ್ಕೆ ಶುರುಮಾಡಿದ್ದೆವು. ಆಗಾಗ ಜಿಂಕೆ ಹುಡುಕಿಕೊಂಡು ಬೆಟ್ಟ ಹತ್ತುತಿದ್ದೆವು. ನಾವು ಐದು ಜನ ಇದ್ದೆವು. ಅಥವ ನಾಲ್ಕೇ ಅನ್ನಬೇಕು. ಯಾಕೆಂದರೆ ನಮ್ಮ ಹಿಂದಿನಿಂದ ಗುಂಡು ಹಾರಿದಾಗ ಹೋಸೆಗಳಲ್ಲಿ ಒಬ್ಬನಿಗೆ ಅಂಡಿನ ಕೆಳಗೆ ಅದು ತಗುಲಿ, ಗಾಯವಾಗಿ, ಕೊಳೆತು, ಅವನ ಕಾಲು ಕತರಿಸಿದ್ದರು.

ಹೀಗೆ ಅಲ್ಲಿದ್ದೆವು. ನಾವು ಯಾವ ಕೆಲಸಕ್ಕೂ ಬಾರದವರು ಅನ್ನಿಸುವುದಕ್ಕೆ ಶುರುವಾಗಿತ್ತು. ಅವರು ನಮಗೆ ನೇಣು ಹಾಕುವುದಿಲ್ಲ ಅನ್ನುವುದು ಗೊತ್ತಿದ್ದಿದ್ದರೆ ಶಾಂತಿ ಬೇಕು ಎಂದು ಕೋರುತಿದ್ದೆವು.

ಹೀಗಿರುವಾಗ ಪೆದ್ರೊ ಝಮೋರನ ಪತ್ರಗಳನ್ನು ತಂದುಕೊಡುತಿದ್ದ, ಅವನ ಕೆಲಸದ ಮೇಲೆ ಬೇರೆ ಊರುಗಳಿಗೆ ಹೋಗುತಿದ್ದ ಅಲ್ಮಾನ್ಸಿಯೋ ಅಲ್ಕಲಾ ಅನ್ನುವವನು ಕಾಣಿಸಿಕೊಂಡ.

ಆಗಿನ್ನೂ ಬೆಳಕು ಹರಿದಿತ್ತು. ನಾವು ದನ ಕತ್ತರಿಸುತಿದ್ದೆವು. ತುತೂರಿ ಶಬ್ಬ ಕೇಳಿಸಿತು. ಅವನಿನ್ನೂ ದೂರವಿದ್ದ. ಬಯಲು ದಾಟಿಕೊಂಡು ಬರುತಿದ್ದ. ಮತ್ತೆ ತುತೂರಿಯ ದನಿ ಕೇಳಿಸಿತು. ಗೂಳಿಯ ಗುಟುರಿನಂಥ ಧ್ವನಿ-ಮೊದಲು ಮೊನಚಾಗಿ, ಆಮೇಲೆ ಓರಟಾಗಿ, ಮತ್ತೆ ಮೊನಚಾಗಿ. ಪ್ರತಿಧ್ವನಿಯು ತುತೂರಿಯ ಸದ್ದನ್ನು ಹಿಗ್ಗಿಸುತ್ತ ಇಲ್ಲಿಯವರೆಗೆ ತಂದು ಕೊನೆಗೆ ಅದು ಧುಮುಕುವ ನದಿಯ ನೀರಿನ ಸದ್ದಿನಲ್ಲಿ ಮುಳುಗಿ ಹೋಯಿತು.

ಇನ್ನೇನು ಸೂರ್ಯ ಮೇಲೆ ಬರುವ ಹೊತ್ತು. ಅಲ್ಮಾನ್ಸಿಯೋ ಅಲ್ಕಲಾ ಸೈಪ್ರಸ್ ಮರಗಳ ಮಧ್ಯೆ ಕಾಣಿಸಿಕೊಂಡ. ಪಾಯಿಂಟ್ ೪೪ ಅಳತೆಯ ತೋಟಾಗಳ ಎರಡು ಬೆಲ್ಟನ್ನು ಎದೆಯ ಮೇಲೆ ಹಾಕಿಕೊಂಡಿದ್ದ. ಒಂದಷ್ಟು ರೈಫಲುಗಳನ್ನು, ಅವು ಸೂಟ್ಕೇಸುಗಳೋ ಅನ್ನುವ ಹಾಗೆ ಕುದುರೆಯ ಬೆನ್ನ ಮೇಲೆ ಹಾಕಿಕೊಂಡಿದ್ದ.

ಕುದುರೆ ಇಳಿದ. ನಮಗೆಲ್ಲ ಒಂದೊಂದು ರೈಫಲು ಕೊಟ್ಟ, ಉಳಿದವನ್ನು ಮತ್ತೆ ಸೂಟ್ಕೇಸಿನ ಹಾಗೆ ಕುದುರೆಯ ಬೆನ್ನಿಗೇರಿಸಿದ.

ಈಗ ನಿಮಗೇನೂ ಅರ್ಜೆಂಟು ಕೆಲಸ ಇರದಿದ್ದರೆ ಸಾನ್ ಬ್ಯೂನವೆಂಚುರಾಕ್ಕೆ ಹೋಗಲು ಸಿದ್ದರಾಗಿ. ನಿಮಗಾಗಿ ಪೆದ್ರೋ ಝಮೋರೋ ಅಲ್ಲಿ ಕಾಯುತಿದ್ದಾನೆ. ನಾನು ಸ್ವಲ್ಪ ಕೆಳಕ್ಕೆ ಹೋಗಿ ಲಾಸ್ ಝೆನಟೆಸ್ ಕಂಡು ಬರುತ್ತೇನೆ. ಬೇಗ ಬಂದುಬಿಡುತ್ತೇನೆ,’ ಅಂದ.

ಮಾರನೆಯ ದಿನ ವಾಪಸು ಬಂದ. ಆಗ ಮುಸ್ಸಂಜೆ. ಮತ್ತೆ ಲಾಸ್ ಝೆನಟೆಸ್ ಅವನ ಜೊತೆ ಬಂದಿದ್ದ. ಮುಸ್ಸಂಜೆಯ ಮಬ್ಬು ಬೆಳಿಕಲ್ಲೂ ಅವರ ಕಪ್ಪಡರಿದ ಮುಖ ಗುರುತು ಸಿಕ್ಕವು. ನಮಗೆ ಗೊತ್ತಿರದ ಇನ್ನೂ ಮೂವರು ಅವರೊಟ್ಟಿಗೆ ಬಂದಿದ್ದರು.

‘ಕುದುರೆಗಳು ದಾರಿಯಲ್ಲಿ ಸಿಗುತ್ತವೆ,’ ಅಂದ. ನಾವೆಲ್ಲ ಅವನ ಹಿಂದೆ ಹೊರಟೆವು.

ಸಾನ್ ಬ್ಯುನೆವೆಂಚುರಾ ತಲುಮವ ಮೊದಲು ಎಷ್ಟೊಂದು ಹುಲ್ಲುಗಾವಲುಗಳಿಗೆ ಬೆಂಕಿ ಬಿದ್ದು ಉರಿಯುತಿದ್ದದ್ದು ನೋಡಿದೆವು. ಸ್ಪಾನಿಶ್ ಮಾತಾಡುವ ಪ್ರದೇಶಗಳ ಎಷ್ಟೊಂದು ಎಸ್ಟೇಟುಗಳು ಸೀಮೆ ಎಣ್ಣೆಯ ಕೆರೆಗೆ ಬೆಂಕಿ ಬಿದ್ದ ಹಾಗೆ ಹೊತ್ತಿ ಉರಿಯುತಿದ್ದವು. ರಾತ್ರಿಯ ಕತ್ತಲಲ್ಲಿ ಕಿಡಿಗಳು ಹಾರುತ್ತ ಹೊಗೆಯ ಮೋಡಕ್ಕೆ ಮಿರುಗು ತಂದಿದ್ದವು.

ಮುಂದೆ ನಡೆದೆವು. ಸಾನ್ ಬ್ಯುನೆವೆಂಚುರಾದ ಬೆಳಕು ನಮ್ಮ ಕಣ್ಣಮ್ನ ಕೋರೈಸಿತು. ನಮ್ಮ ಕೆಲಸ ಅಲ್ಲಿದೆ, ಉಳಿದಿದ್ದನ್ನು ನಾವು ಮುಗಿಸಬೇಕಾಗಿದೆ ಅನ್ನುತಿರುವ ಹಾಗಿತ್ತು.

ನಾವಿನ್ನೂ ಅಲ್ಲಿಗೆ ತಲುಪಿರಲಿಲ್ಲ. ಕೆಲವು ಜನ ಕುಕ್ಕುಲೋಟದಲ್ಲಿ ಕುದುರೆ ಓಡಿಸಿಕೊಂಡು ನಮ್ಮತ್ತ ಬರುತಿದ್ದರು. ಅವರ ಜೀನುಗಳಿಗೆ ಹಗ್ಗ ಕಟ್ಟಿದ್ದರು. ಗುಂಡೇಟು ಬಿದ್ದಿದ್ದ ಕೆಲವರನ್ನು ಎಳೆದುಕೊಂಡು ಬರುತಿದ್ದರು. ಅವರೋ ಆಗಾಗ ನೆಲಕ್ಕೆ ಬೀಳುತ್ತ ಅಂಬೆಗಾಲಿಟ್ಟು ಮುಂದೆ ಸಾಗುತಿದ್ದರು. ಕೈ ಇಲ್ಲದವರನ್ನು ಕೆಲವರು ಎಳಕೊಂಡು ಬರುತಿದ್ದರೆ ತಲೆ ಇರದ ಹೆಣಗಳನ್ನು ಇನ್ನಷ್ಟು ಜನ ಎಳೆಯುತಿದ್ದರು.

ನಮ್ಮನ್ನು ದಾಟಿ ಹೋದರು. ಅವರ ಹಿಂದೆ ಪೆದ್ರೋ ಝಮೋರ ಮತ್ತೆ ತುಂಬ ಜನ ಕುದುರೆಗಳನ್ನೇರಿ ಬರುತಿದ್ದರು. ಯಾವತ್ತೂ ಅಷ್ಟೊಂದು ಜನ ಬಂದಿರಲಿಲ್ಲ. ನಮಗೆ ಖುಷಿಯಾಗಿತ್ತು.

ಅಷ್ಟುದ್ದದ ಜನರ ಸಾಲು ಹಿಂದೆ ಒಂದು ಕಾಲದಲ್ಲಿ ಮಾಡುತಿದ್ದ ಹಾಗೆ ಈಗ ಮತ್ತೆ ಮಹಾ ಬಯಲಲ್ಲಿ ಸಾಗುತಿರುವುದು ಕಂಡು ಖುಷಿಯಾಗಿತ್ತು. ಶುರುವಿನಲ್ಲಿ ನಾವು ಗಾಳಿಗೆ ಉದುರಿದ ಮುಳ್ಳು ಕಾಯಿಗಳ ಹಾಗೆ ಮಹಾ ಬಯಲಲ್ಲಿ ಎಲ್ಲೆಂದರಲ್ಲಿ ನಮಗೆ ನಾವೇ ಕ್ರಾಂತಿಯ ಸೈನ್ಯ ಸೇರಿ ಭಯ ಹುಟ್ಟಿಸುತಿದ್ದೆವು. ಆ ಕಾಲ ಮತ್ತೆ ಬರುತಿತ್ತು.
* * *

ಅಲ್ಲಿಂದ ಸಾನ್ ಪೆದ್ರೋ ಕಡೆಗೆ ಹೊರಟೆವು. ಆ ಊರಿಗೆ ಬೆಂಕಿ ಇಟ್ಟೆವು. ಮತ್ತೆ ಎಲ್ ಪಟಕಲ್‍ಗೆ ಹೊರಟೆವು. ಅದು ಬೆಳೆದ ಧಾನ್ಯ ಕೊಯ್ಲಿಗೆ ಬರುವ ಕಾಲ. ತೆನೆ ಒಣಗಿದ್ದವು. ಬಯಲ ಗಾಳಿಗೆ ಸಿಕ್ಕಿ ನೆಲ ಮುಟ್ಟುವ ಹಾಗೆ ಬಾಗಿದ್ದವು. ಬೆಂಕಿ ಹೊತ್ತಿ, ಧಗಧಗಿಸಿ, ಹರಡುತ್ತಾ ಇಡೀ ಬಯಲಲ್ಲಿ ಎದುರಿಲ್ಲದೆ ಸಾಗುವುದನ್ನು ನೋಡುವುದಕ್ಕೆ ತುಂಬ ಚೆನ್ನಾಗಿ ಕಾಣುತಿತ್ತು. ಹೊಗೆ ಹಬ್ಬಿ ಆಕಾಶ ಆವರಿಸಿ ತುಯ್ದಾಡುತಿತ್ತು. ಕಬ್ಬಿನ ವಾಸನೆ, ಜೇನಿನ ವಾಸನೆ ಬರುತಿತ್ತು. ಬೆಂಕಿ ಕಬ್ಬಿನ ಗದ್ದೆಯನ್ನೂ ಮುಟ್ಟಿತ್ತು.

ಬೆರ್‍ಚಪ್ಪಗಳ ಹಾಗೆ ಮುಖ ಕಪ್ಪು ಮಾಡಿಕೊಂಡು ಹೊಗೆಯಿಂದ ಆಚೆಗೆ ಬಂದೆವು. ದನಕರುಗಳನ್ನೆಲ್ಲ ಅಟ್ಟಾಡಿಸಿ ಒಂದೆಡೆಗೆ ಕೂಡಿದೆವು-ಚರ್ಮ ಸುಲಿಯುವುದಕ್ಕೆ. ದನದ ಚರ್‍ಮ ಮಾರುವುದು ನಮ್ಮ ವ್ಯವಹಾರವಾಗಿತ್ತು.

ಯಾಕೆಂದರೆ ಪೆದ್ರೋ ಝಮೋರ ನಮಗೆ ಹೇಳುತಿದ್ದ- ‘ಶ್ರೀಮಂತರ ಹಣ ಬಳಸಿಕೊಂಡು ನಾವು ಕ್ರಾಂತಿ ಮಾಡುತ್ತೇವೆ. ನಮ್ಮ ಖರ್ಚು, ಆಯುಧಗಳಿಗೆ ಬೇಕಾದ ಹಣ ಎಲ್ಲವನ್ನೂ ಶ್ರೀಮಂತರೇ ತೆರಬೇಕು. ಈಗೇನೋ ಹೋರಾಡಿ ಕಾಪಾಡಿಕೊಳ್ಳಬೇಕಾದ ನಮ್ಮದೇ ಅನ್ನುವ ಧ್ವಜವಿಲ್ಲ. ಆದರೂ ನಾವು ಬೇಗ ದುಡ್ಡು ಹೊಂದಿಸಬೇಕು. ಸರ್ಕಾರದ ಸೈನ್ಯ ಬಂದಾಗ ನಮ್ಮ ಶಕ್ತಿ ಎಷ್ಪಿದೆ ಅನ್ನುವುದು ಅವರಿಗೆ ಗೊತ್ತಾಗಬೇಕು.’ ಹಾಗಂದಿದ್ದ ಅವನು.

ಸರ್ಕಾರಿ ಸೈನ್ಯ ಕೊನೆಗೂ ವಾಪಸ್ಸು ಬಂದಾಗ ನಮ್ಮನ್ನು ಮತ್ತೆ ಮೊದಲಿನ ಹಾಗೇ ಕೊಚ್ಚಿದರು. ಆದರೂ ಹಾಗೆ ಕೊಲ್ಲುವುದು ಮೊದಲಿನಷ್ಟು ಸುಲಭವಾಗಿರಲಿಲ್ಲ. ನಮ್ಮನ್ನು ಕಂಡರೂ ಅವರು ಅಂಜುತ್ತಾರೆ ಅನ್ನುವುದು ದೂರದಿಂದಲೇ ತಿಳಿಯುತಿತ್ತು.

ನಮಗೂ ಅವರನ್ನು ಕಂಡರೆ ಭಯವಾಗುತಿತ್ತು. ಅವರ ಸರಂಜಾಮುಗಳ ಸದ್ದು ಕೇಳಿದರೂ, ಅವರ ಮೇಲೆ ಎರಗಲೆಂದು ನಾವು ಕದ್ದು ಕೂತಿದ್ದ ರಸ್ತೆಯ ಕಲ್ಲುಗಳ ಮೇಲೆ ಅವರ ಕುದುರೆ ಗೊರಸಿನ ಸದ್ದು ಕೇಳಿದರೂ ನಮ್ಮ ಎದೆಗಳು ಬಾಯಿಗೇ ಬರುತಿದ್ದವು. ಅವರು ನಮ್ಮನ್ನು ಹಾದು ಹೋಗುವಾಗ ‘ನಿಮ್ಮನ್ನು ಆಗಲೇ ಗಮನಿಸಿದ್ದೇವೆ, ಸುಮ್ಮನೆ ಹೆದರಿದ ಆಟ ಇದು’, ಅನ್ನುತಿದ್ದಾರೇನೋ ಅನ್ನುವಹಾಗೆ ನಮ್ಮ ಕಡೆ ಓರೆ ನೋಟ ಬೀರುತಿದ್ದಾರೆ ಅನಿಸುತಿತ್ತು.

ಹಾಗೆ ಯಾಕೆ ಅನಿಸುತಿತ್ತು ಅಂದರೆ ಅವರು ತಟ್ಟನೆ ನೆಲದ ಮೇಲೆ ಮಲಗಿ, ಕುದುರೆಗಳನ್ನೇ ಗುರಾಣಿಗಳ ಥರ ಬಳಸುತ್ತ ನಮ್ಮ ಮೇಲೆ ದಾಳಿ ಮಾಡುತಿದ್ದರು; ಅದೇ ಹೊತ್ತಿನಲ್ಲಿ ಇನ್ನು ಕೆಲವರು ನಮ್ಮ ಹಿಂದಿನಿಂದ ಬಂದು ಎರಗುತಿದ್ದರು. ನಾವು ಕೋಳಿಪಿಳ್ಳಗಳ ಥರ ಸಾಯುತಿದ್ದೆವು. ನಾವು ತುಂಬ ಜನ ಇರುವುದು ನಿಜವಾದರೂ ಹೀಗೇ ನಡೆಯುತ್ತಿದ್ದರೆ ಬಹಳ ಕಾಲ ನಾವು ತಡಕೊಳ್ಳಲು ಆಗುವುದಿಲ್ಲ ಅನಿಸುತಿತ್ತು.

ಯಾಕೆ ಅಂದರೆ ಇವರು ಮೊದಲು ನಮ್ಮ ಮೇಲೆ ದಾಳಿ ಮಾಡುತಿದ್ದ ಜನರಲ್ ಅರ್ಬಾನೋನ ಸೈನಿಕರಲ್ಲ. ಅವರಾದರೆ ನಾವು ಕಿರುಚಾಡಿ, ಹ್ಯಾಟು ಬೀಸಿದರೆ ಅಂಜುತಿದ್ದರು; ಆ ಸೈನಿಕರನ್ನ ಹುಲ್ಲುಗಾವಲುಗಳಿಂದ ಬಲವಂತವಾಗಿ ಹಿಡಿದುಕೊಂಡು ಬಂದು ಸೈನ್ಯಕ್ಕೆ ಸೇರಿಸಿರುತಿದ್ದರು; ನಾವು ಕಡಮೆ ಜನ ಇದ್ದೇವೆ ಅಂತ ಗೊತ್ತಾದಾಗ ಮಾತ್ರ ನಮ್ಮ ಮೇಲೆ ಬೀಳುತಿದ್ದರು. ಅವರೆಲ್ಲ ಮುಗಿದು ಹೋಗಿ ಆಮೇಲೆ ಬೇರೆಯವರು ಬಂದರು. ತೀರ ಕಷ್ಟ ಅಂದರೆ ಈಗ ಕೊನೆಯಲ್ಲಿ ಬರುತಿದ್ದಾರಲ್ಲ, ಇವರೇ. ಇವರು ಯಾರೋ ಒಲಾಚಿಯಾಗಳಂತೆ. ತುಂಬ ವಡ್ಡರು. ಯುದ್ಧಕ್ಕೆ ಹೇಳಿಮಾಡಿಸಿದವರು. ಟೆಯೊಕಾಲ್ಚಿಟೆಯ ಬೆಟ್ಟಗಾಡಿನ ಜನದ ಜೊತೆ ಟೆಪಿಹ್ಯೂನ ಇಂಡಿಯನ್ನರು ಸೇರಿ ಹುಟ್ಟಿದವರು. ಮೈ ತುಂಬ ಕೂದಲಿರುವವರು. ಎಷ್ಟೋ ದಿನ ಊಟ ಇಲ್ಲದೆ ಇರಬಲ್ಲವರು. ಅವರು ಗಂಟೆಗಟ್ಟಲೆ ಕಣ್ಣು ಮಿಟುಕಿಸದೆ ನಾವು ಬಚ್ಚಿಟ್ಟುಕೊಂಡ ಜಾಗವನ್ನೇ ದಿಟ್ಟಿಸುತ್ತಾ ಇದ್ದು ನಾವು ತಲೆ ಹೊರಗೆ ಹಾಕಿದ ತಕ್ಷಣ ನಮ್ಮ ಮೇಲೆ ೩ಂ-೩ಂ ಕ್ಯಾಲಿಬರ್ ಗುಂಡು ಹಾರಿಸುತಿದ್ದರು; ನಮ್ಮ ಬೆನ್ನು ಮೂಳೆ ಕೊಳೆತ ಕೊಂಬೆಯ ಹಾಗೆ ಲಟಕ್ಕನೆ ಮುರಿಯುತಿದ್ದವು.

ರಸ್ತೆಬದಿಗಳಲ್ಲಿ ಅವಿತಿಟ್ಟುಕೊಂಡು ಸರ್ಕಾರಿ ಸೈನ್ಯ ಬರಲೆಂದು ಹೊಂಚು ಹಾಕುವುದಕ್ಕಿಂತ ಹುಲ್ಲಗಾವಲುಗಳ ಮೇಲೆ ದಾಳಿಮಾಡುವುದು ಸಲೀಸಾಗಿತ್ತು ಅಂತ ಹೇಳುವುದೇ ಬೇಕಾಗಿಲ್ಲ. ಅದಕ್ಕೇ ನಾವು ಚದುರಿ ಅಲ್ಲೊಂದಿಷ್ಟು ದಾಳಿ, ಇಲ್ಲೊಂದಿಷ್ಟು ದಾಳಿ ಮಾಡುತ್ತಾ, ಸದಾ ಓಡುತ್ತಲೇ ಇದ್ದು, ಹುಚ್ಚು ಹಿಡಿದ ಕತ್ತೆಗಳ ಹಾಗೆ ಇದ್ದುದರಿಂದಲೇ ನಾವು ಹೆಚ್ಚು ಅಪಾಯಮಾಡುವುದಕ್ಕೆ ಆಗುತಿತ್ತು.

ಈ ಥರದಲ್ಲೇ ನಾವು ಜಾಝ್ಮಿನ್ ಅಗ್ನಿಪರ್ವತದ ಇಳಿಜಾರಿನಲ್ಲಿದ್ದ ಹುಲ್ಲುಗಾವಲಿಗೆ ಬೆಂಕಿ ಇಡುತಿದ್ದಾಗ ನಮ್ಮಲ್ಲೇ ಕೆಲವರು ಸಮೀಪದ ಸರ್ಕಾರಿ ಪಡೆಗಳ ಮೇಲೆ ಬೀಳುತಿದ್ದೆವು. ಮರದ ಕೊಂಬೆಗಳನ್ನು ದರದರ ಎಳೆದು ಧೂಳೆಬಿಸಿ, ಕೂಗಾಡಿ ನಾವು ಬಹಳ ಜನ ಇದ್ದೇವೆಂಬ ಭ್ರಮೆ ಹುಟ್ಟಸುತಿದ್ದೆವು.

ಸೈನಿಕರು ಕಾಯುತ್ತ ಕೂತಿರುತಿದ್ದರು. ಸ್ವಲ್ಪ ಹೊತ್ತು ಅಕ್ಕಪಕ್ಕ ಅತ್ತ ಇತ್ತ ಓಡುತಿದ್ದರು. ಹಿಂದೆ ಮುಂದೆ ನೋಡುತ್ತ ಧಾವಂತಪಡುತಿದ್ದರು. ಅವರಿದ್ದ ಜಾಗದಿಂದ ಬೆಟ್ಟಕ್ಕೆ ಹಚ್ಚಿದ ಬೆಂಕಿ ಕಾಣುತಿತ್ತು. ಬೆಟ್ಟದಲ್ಲಿದ್ದ ಸಮತಟ್ಟು ಜಾಗವೆಲ್ಲ ಹೊತ್ತಿ ಉರಿಯುವ ಹಾಗೆ ಇರುತಿತ್ತು. ಹುಲ್ಲುಕಾವಲುಗಳೂ ನಡುನಡುವಿನ ಜನವಸತಿಗಳೂ ಉರಿಯುವುದು ಹಗಲೂ ಇರುಳೂ ಕಾಣುತಿತ್ತು. ಒಂದೊಂದು ಸಲ ತುಝಮಿಲ್ಪಾ, ಝಪುತಿತ್ಲಾನ್‍ನಂಥ ದೊಡ್ಡ ಊರುಗಳಿಗೂ ಬೆಂಕಿ ಬಿದ್ದಿರುವುದು ರಾತ್ರಿಯ ಕತ್ತಲಲ್ಲಿ ಗೊತಾಗುತಿತ್ತು. ಒಲಾಚಿಯಾಗಳು ಆ ದೊಡ್ಡ ಊರುಗಳ ಕಡೆ ಹೆಜ್ಜೆ ಹಾಕಲೇಬೇಕಾಗುತಿತ್ತು. ಅವರು ಅಲಿಗೆ ತಲುಪುವ ಹೊತ್ತಿಗೆ ಇಲ್ಲಿ ಹತ್ತಿರದಲ್ಲೇ ಇರುವ ತೊತೊಲಿಮಿಸ್ಟಾಕ್ಕೆ ಬೆಂಕಿ ಬಿದ್ದಿರುತಿತ್ತು.

ಬಲು ಚಂದದ ದೃಶ್ಯ: ಸೈನಿಕರು ರಾತ್ರಿಯ ಲೂಟಿಗೆ ಹೋಗಿದ್ದಾಗ ಬೇಲಿಯಂಚಿನಲ್ಲಿ ಗೋಜಲಾಗಿ ಬೆಳೆಯುವ ಸೌದೆಗಿಡಗಳ ಮರೆಯಿಂದ ಹೊರಬರುವುದು; ಅಲ್ಲಿರದ ಶತ್ರುವನ್ನು ಹುಡುಕಿಕೊಂಡು ಅವರೆಲ್ಲ ಸುಮ್ಮನೆ ದೊಡ್ಡ ಬಯಲು ದಾಟಿ ಹೋಗುವುದನ್ನು ನೋಡುವುದು, ಬೆಟ್ಟಗಳ ನಡುವೆ ಕುದುರೆ ಲಾಳದ ಆಕಾರದಲಿರುವ ಬಯಲಿನಲ್ಲಿ ಅವರು ತಳವಿರದ ಮಡುವಿನಲ್ಲಿ ಮುಳುಗಿದ ಹಾಗೆ ಕಳೆದು ಹೋಗುವುದನ್ನು ನೋಡುವುದು…
* * *

ಎಲ್ ಕ್ಯುಸ್ತೆಕೊಮಾಟೆಯನ್ನು ಸುಟ್ಟೆವು. ಅಲ್ಲಿ ಗೂಳಿ ಕಾಳಗ ಮಾಡಿದೆವು. ಪೆದ್ರೊ ಝಮೋರನಿಗೆ ಗೂಳಿಕಾಳಗ ಇಷ್ಟ.

ಸರ್ಕಾರಿ ಸೃನಿಕರು ಔತ್ಲಾನ್ ದಿಕ್ಕಿಗೆ ಹೋಗಿದ್ದರು. ಅಲ್ಲಿ ಬಂಡುಕೋರರ ನೆಲೆ ಇದೆ. ನಾವೆಲ್ಲ ಅಲ್ಲಿ ಅಡಗಿದ್ದೇವೆ ಅನ್ನುವುದು ಅವರ ತಿಳಿವಳಿಕೆ. ಅವರು ಹೋದರು, ಇಡೀ ಎಲ್ ಕ್ಯುಸ್ತೆಕೊಮಾಟೆಯನ್ನು ನಮಗಾಗಿ ಬಿಟ್ಟಿದ್ದರು.

ಗೂಳಿ ಕಾಳಗ ನಡೆಸುವ ಅವಕಾಶ ನಮಗೆ ಸಿಕ್ಕಿತು. ಅವರು ಎಂಟು ಸೈನಿಕರನ್ನು ತೊರೆದು ಹೋಗಿದ್ದರು, ಒಬ್ದಿ ಅಧಿಕಾರಿ ಇದ್ದ. ಸ್ಪಾನಿಶ್ ಎಸ್ಟೇಟು ಮನೆ ಮತ್ತದರ ಉಸ್ತುವಾರಿಯವನನ್ನು ಬಿಟ್ಟು ಹೋಗಿದ್ದರು. ಗೂಳಿ ಕಾಳಗ ಎರಡು ದಿನ ನಡೆಯಿತು.

ಕಾಳಗದ ಕಣವೆಂದು ಕುರಿಗಳ ರೊಪ್ಪದಂಥ ಬೇಲಿ ಕಟ್ಟಿದೆವು. ಬೇಲಿಯ ಮೇಲೆ ಸುತ್ತಲೂ ನಾವು ಕೂತೆವು. ಗೂಳಿ ಕಾಳಗದ ವೀರರು ತಪ್ಪಿಸಿಕೊಂಡು ಹೋಗಬಾರದಲ್ಲ, ಅದಕ್ಕೆ. ಯಾಕೆಂದರೆ ಝಮೋರ ಕತ್ತಿ ಹಿರಿದು ಅವರನ್ನು ಕೊಲ್ಲುವುದಕ್ಕೆ ಗೂಳಿಯ ಹಾಗೆ ನುಗ್ಗಿದ ತಕ್ಷಣ ತಪ್ಪಿಸಿಕೊಳ್ಳುವುದಕ್ಕೆ ಅವರು ಇನ್ನಿಲ್ಲದ ಪಾಡು ಪಡುತಿದ್ದರು.

ಒಂದಿಡೀ ಮಧ್ಯಾಹ್ನಕ್ಕೆ ಎಂಟು ಸೈನಿಕರು ಸಾಕಾದರು. ಮಿಕ್ಕವರಿಬ್ಬರು ಇನ್ನೊಂದು ದಿನಕ್ಕೆ. ನಮಗೆ ಬಹಳ ಕಷ್ಟಕೊಟ್ಟವನು ಎಸ್ಪೇಟಿನ ಉಸ್ತುವಾರಿ ಮನುಷ್ಯ. ಬಿದಿರು ಗಳುವಿನ ಹಾಗೆ ಉದ್ದಕ್ಕೆ, ತೆಳ್ಳಗೆ ಇದ್ದ. ಸರಕ್ಕನೆ ಪಕ್ಕಕ್ಕೆ ಸರಿದು ತಪ್ಪಿಸಿಕೊಳ್ಳುತಿದ್ದ. ಅಧಿಕಾರಿ ಮಾತ್ರ ಸಲೀಸಾಗಿ ಸತ್ತು ಹೋದ. ಗಿಡ್ಡ, ಡುಮ್ಮ. ಕತ್ತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಯಾವ ತಂತ್ರವನ್ನೂ ಮಾಡದೆ ಸಾಯುವುದೇ ತನಗೆ ಬೇಕಾಗಿದೆ ಅನ್ನುವ ಹಾಗೆ ಸತ್ತು ಹೋದ. ಉಸ್ತುವಾರಿಯವನು ಮಾತ್ರ ಚೆನ್ನಾಗಿ ಆಟ ಆಡಿಸಿದ.

ಪೆದ್ರೊ ಝಮೋರ ಅವರಿಗೆಲ್ಲ ಒಂದೊಂದು ಕಂಬಳಿ ಕೊಟ್ಟಿದ್ದ. ಆ ದಪ್ಪ ಕಂಬಳಿ ಬಳಸಿಕೊಂಡೇ ಉಸ್ತುವಾರಿಯವನು ತನ್ನನ್ನು ಕಾಪಾಡಿಕೊಳ್ಳುತ್ತ ಚೆನ್ನಾಗಿ ಆಟ ಆಡಿಸಿದ. ಚುಚ್ಚಿ ಸಾಯಿಸುವುದೇ ಈ ಆಟದ ಗುರಿ ಅನ್ನುವುದು ಗೊತ್ತಾಗುತಿದ್ದ ಹಾಗೆ ತನ್ನತ್ತ ನುಗ್ಗಿ ಬರುವ ಕತ್ತಿಗೆ ಅಡವಾಗಿ ಕಂಬಳಿ ಹಿಡಿದು ಕಾಪಾಡಿಕೊಳ್ಳುತಿದ್ದ. ಪೆದ್ರೊ ಝಮೋರ ದಣಿದು ಹೋದ. ಉಸ್ತುವಾರಿಯವನನ್ನು ಎಷ್ಟು ಅಟ್ಟಾಡಿಸಿದರೂ ಒಂದೆರಡು ತರಚುಗಾಯ ಮಾಡುವದಕ್ಕೆ ಮಾತ್ರ ಸಾಧ್ಯವಾಗಿತ್ತು. ಝಮೋರ ತಾಳ್ಮೆ ಕಳೆದುಕೊಂಡ. ಗೂಳಿಗಳು ಮಾಡುವ ಹಾಗೆ ನೇರವಾಗಿ ಎರಗುವ ಬದಲಾಗಿ ಉಸ್ತುವಾರಿಯವನ ಪಕ್ಕೆಯನ್ನು ಗುರಿಯಾಗಿಟುಕೊಂಡು ದಾಳಿ ಮಾಡಿದ. ಒಂದು ಕೈಯಲ್ಲಿ ಕಂಬಳಿಯನ್ನು ಪಕ್ಕಕ್ಕೆ ಸರಿಸಿ ಇನ್ನೊಂದು ಕೈಯಲ್ಲಿದ್ದ ಕತ್ತಿಯಿಂದ ಇರಿದ. ಉಸ್ತುವಾರಿಯವನಿಗೆ ಏನಾಗುತ್ತಿದೆ ಗೊತ್ತಾಗಿರಲಿಲ್ಲ. ಅಟ್ಟಿಸಿಕೊಂಡು ಬರುವ ಜೇನು ಹುಳುಗಳನ್ನು ಓಡಿಸುವವನ ಹಾಗೆ ಕಂಬಳಿ ಬೀಸುತ್ತಲೇ ಇದ್ದ. ಪಕ್ಕೆಯಿಂದ ರಕ್ತ ಸುರಿಯುವುದು ಕಂಡಾಗಷ್ಟೆ ಬೀಸುವುದು ನಿಲ್ಲಿಸಿದ. ಪಕ್ಕೆಯಲ್ಲಿ ಆದ ಗಾಯಕ್ಕೆ ಬೆರಳೊತ್ತಿ ಅವನು ಬಿಳಚಿಕೊಳ್ಳುವಂತೆ ಮಾಡಿ ಸುರಿಯುತಿದ್ದ ಕೆಂಪು ದ್ರವವನ್ನು ನಿಲ್ಲಿಸಲು ಕಷ್ಟಪಟ್ಟ. ಕಣದ ಮಧ್ಯದಲ್ಲಿ ಬಿದ್ದುಕೊಂಡು ನಮ್ಮನ್ನೆಲ್ಲ ನೋಡುತಿದ್ದ. ಹಾಗೇ ಬಿಟ್ಟರೆ ಸಾಯುವುದಕ್ಕೆ ಬಹಳ ಹೊತ್ತು ಮಾಡುತ್ತಾನೆಂದು ನಾವು ಅವನನ್ನು ನೇಣಿಗೆ ಹಾಕುವವರೆಗೂ ಹಾಗೇ ಬಿದ್ದಿದ್ದ.

ಅವತ್ತಿನಿಂದ ಯಾವ ಯಾವಾಗ ಅವಕಾಶಸಿಗುತಿತ್ತೋ ಆಗೆಲ್ಲ ಗೂಳಿಕಾಳಗ ಮಾಡುತಿದ್ದ ಝಮೋರ.
* * *

ಆ ಸುಮಾರಿನಲ್ಲಿ ಝಮೋರನಿಂದ ಹಿಡಿದು ನಾವೆಲ್ಲರೂ ಬೆಟ್ಟದ ಕೆಳಗಿನಿಂದ ಬಂದವರೇ. ಆಮೇಲೆ ಬೇರೆ ಬೇರೆ ಊರುಗಳವರು ಬಂದು ಸೇರಿಕೊಂಡರು. ತೆಳು ಬಣ್ಣದ, ಗಿಣ್ಣದಲ್ಲಿ ಮಾಡಿದಂಥ ಮುಖದ, ಉದ್ದನೆ ಕೊಳವೆ ಕಾಲಿನ ಝಕೊ‌ಆಲ್ಕೋ ಇಂಡಿಯನ್ನರು ಬಂದರು. ಚಳಿ ಸೀಮೆಯಿಂದ ಬಂದವರು. ತಾವು ಮಝಮಿತ್ಲಾದಿಂದ ಬಂದವರು ಅಂದರು. ಯಾವಾಗಲೂ ಚಳಿಯೇ ಅನ್ನುವ ಹಾಗೆ ಬಣ್ಣದ ಶಾಲು ಸದಾ ಹೂದ್ದಿರುತಿದ್ದರು. ಬೆಚ್ಚಗಿದ್ದರೆ ಹೊಟ್ಟೆ ಹಸಿಯುವುದಿಲ್ಲ ಅನ್ನುತಿದ್ದರು. ಅದಕ್ಕೇ ಝಮೋರ ಅವರನ್ನು ಅಗ್ನಿಪರ್ವತದ ಕಾವಲಿಗೆ ಕಳುಹಿಸಿದ. ಅಲ್ಲಿ ಸದಾ ಬೀಸುವ ಬಿಸಿ ಗಾಳಿ, ಬಿಸಿ ಮರಳು, ಬಂಡೆ ಬಿಟ್ಟರೆ ಬೇರೆ ಇರಲಿಲ್ಲ. ತೆಳು ಬಣ್ಣದ ಇಂಡಿಯನ್ನರು ಬಲು ಬೇಗ ಝಮೋರನನ್ನು ಹಚ್ಚಿಕೊಂಡುಬಿಟ್ಟರು. ಅವನಿಂದ ದೂರವಾಗುವುದೇ ಇಲ್ಲ ಅನ್ನುತಿದ್ದರು. ಅವರು ಅವನ ನೆರಳೋ ಅನ್ನುವ ಹಾಗೆ ಸದಾ ಅವನ ಜೊತೆಗೇ ಇದ್ದು ಹೇಳಿದ ಕೆಲಸ ಮಾಡುತಿದ್ದರು. ಅವನಿಗಾಗಿ ಒಂದೊಂದು ಸಲ ಹಳ್ಳಿಯ ಹುಡುಗಿಯರನ್ನು ಹೊತ್ತು ಬರುತ್ತಿದ್ದರು.

ಯಾರು ಯಾರಿಗೆ ಓಡುವುದು ಸಾಧ್ಯವಿತ್ತೋ ಅವರೆಲ್ಲ ಓಡಿ ಹೋದರು. ಎಲ್ ಚಿಹೂಯ್ಲ ಕ್ಯಾಮಿನೋ ಡಿ ಡಿಯೋಸ್‍ನಲ್ಲೇ ಉಳಿದ. ಚಳಿ ತಪ್ಪಿಸಿಕೊಳ್ಳುವುದಕ್ಕೋ ಅನ್ನುವ ಹಾಗೆ ಕಂಬಳಿ ಹೊದ್ದು ಮದ್ರೋನೆ ಮರದ ಹಿಂದೆ ಕುಸಿದು ಕೂತಿದ್ದ. ಸಾವನ್ನು ಹಂಚಿಕೊಳ್ಳಲು ಇಷ್ಟ ಅನ್ನುವ ಹಾಗೆ ಅವನನ್ನು ದಾಟಿ ಹೋಗುತಿದ್ದ ನಮ್ಮ ಗುಂಪಿನ ಒಬ್ಬೊಬ್ಬರನ್ನೂ ದಿಟ್ಟಿಸಿ ನೋಡುತಿದ್ದ. ಅವನು ನಮ್ಮನ್ನು ನೋಡಿ ನಗುತ್ತಿರುವ ಹಾಗೆ ಕಾಣುತಿತ್ತು. ರಕ್ತದಿಂದ ಕೆಂಪಾದ ಹಲ್ಲು ಕಿರಿದು ನಗುತ್ತ ಕೂತ ಹಾಗಿತ್ತು.

ನಾವು ಚೆದುರಿ ಹೋಗಿದ್ದು ಬಹಳ ಜನಕ್ಕೆ ಒಳ್ಳೆಯದೇ ಆಯಿತು. ಕೆಲವರಿಗೆ ಕೆಟ್ಟದಾಯಿತು. ಯಾವುದೋ ರಸ್ತೆಯಲ್ಲಿ ಯಾವುದೋ ಕಂಬಕ್ಕೆ ನಮ್ಮ ಸಂಗಾತಿಯೊಬ್ಬನ ಕಾಲಿಗೆ ಹಗ್ಗಕಟ್ಟಿ ತಲೆಕೆಳಗಾಗಿ ನೇತು ಹಾಕಿರುತಿದ್ದ ದೃಶ್ಯ ಅಪರೂಪದ್ದಾಗಿರಲಿಲ್ಲ. ಅವರು ಮುದಿಯಾಗಿ, ಹದಮಾಡದ ಚರ್ಮದ ಹಾಗೆ ಮುರುಟಿ ಹೋಗುವ ತನಕ ಹಾಗೇ ನೇತಾಡುತಿದ್ದರು. ರಣ ಹದ್ದುಗಳು ಅವರ ಕರುಳನ್ನು ಕಿತ್ತು ತಿನ್ನುತಿದ್ದವು. ಕೊನೆಗೆ ಬರೀ ಮೂಳೆ ಹಂದರವಷ್ಟೆ ಉಳಿಯುತಿತ್ತು. ಅವರನ್ನ ತೀರ ಎತ್ತರದಲ್ಲಿ ನೇಣು ಹಾಕಿರುತಿದ್ದರು. ಗಾಳಿ ಬೀಸಿದಾಗ ಅವರ ಅಸ್ತಿಪಂಜರ ಚರ್‍ಚಿನ ಗಂಟೆಗಳ ಹಾಗೆ ದಿನಗಟ್ಟಲೆ ಅತ್ತ ಇತ್ತ ತೂಗುತಿತ್ತು. ಕೆಲವು ಸಾರಿ ತಿಂಗಳ ತನಕ. ಕೆಲವು ಸಾರಿ ಅವರ ಪ್ಯಾಂಟು ಮಾತ್ರ ಗಾಳಿಗೆ ಪಟಪಟ ಅಲ್ಲಾಡುತ್ತ ಯಾರೋ ಓಣಹಾಕಿದ ಬಟ್ಟೆ ಅನ್ನಿಸುತಿತ್ತು. ನಿಜ ಗೊತ್ತಾದಾಗ ಮಾತ್ರ ಪರಿಸ್ಥಿತಿ ತೀರ ಗಂಭೀರ ಅನ್ನುವುದು ಮನಸ್ಸಿಗೆ ಬರುತಿತ್ತು.

ನಾವು ಕೆಲವರು ದೊಡ್ಡ ಬೆಟ್ಟ ಸೆರೋ ಗ್ರಾಂಡ್ ಕಡೆಗೆ ಹೊರಟೆವು. ಹಾವಿನ ಹಾಗೆ ತೆವಳಿಕೊಂಡು ಹೋದೆವು. ವಿಸ್ತಾರ ಬಯಲು ನೋಡುತ್ತ ಕಾಲ ತಳ್ಳುತಿದ್ದೆವು. ನಾವು ಹುಟ್ಟಿದ, ಬೆಳೆದ ಊರುಗಳು ಅಲ್ಲಿ ಕೆಳಗೆ ಇದ್ದವು. ನಮ್ಮನ್ನು ಕೊಲ್ಲಲು ಕಾಯುತ್ತಿರುವ ಜನ ಈಗ ಅಲ್ಲಿದ್ದರು. ಒಂದೊಂದು ಸಲ ಮೋಡದ ನೆರಳು ಕೊಡ ದಿಗಿಲು ಹುಟ್ಟಸುತಿತ್ತು ನಮಗೆ.

ನಾವು ಹೋರಾಡುವ ಜನ ಅಲ್ಲ, ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಅಂತ ಹೇಳುವುದಕ್ಕೆ ತಯಾರಾಗಿದ್ದೆವು-ಕೇಳುವವರು ಯಾರಾದರೂ ಇದ್ದರೆ. ಆದರೆ ನಾವು ಒಂದಲ್ಲ ಒಂದು ಊರಿನಲ್ಲಿ ಮಾಡಿದ ಅನಾಹುತ, ಅಪಾಯಗಳು ಎಷ್ಟು ದೊಡ್ಡವೆಂದರೆ ಎಲ್ಲ ಜನ ನಮ್ಮನ್ನು ಕೊಲ್ಲುವುದಕ್ಕೆ ಸಿದ್ಧವಾಗಿದ್ದರು. ನಾವು ಕೇವಲ ಶತ್ರುಗಳನ್ನು ಸಂಪಾದಿಸಿಕೊಂಡಿದ್ದೆವು. ಬೆಟ್ಟಗಳಲ್ಲಿದ್ದ ಇಂಡಿಯನ್ನರಿಗೂ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ಅವರ ಪ್ರಾಣಿಗಳನ್ನೆಲ್ಲ ನಾವು ಸಾಯಿಸಿದ್ದೇವೆ ಅನ್ನುತಿದ್ದರು. ಸರ್ಕಾರ ಅವರಿಗೆ ಬಂದೂಕುಗಳನ್ನು ಕೊಟ್ಟಿತ್ತು. ಅವನ್ನು ಹೊತ್ತು ಓಡಾಡುತ್ತಿದ್ದರು. ನಾವು ಕಣ್ಣಿಗೆ ಬಿದ್ದರೆ ಕೊಲ್ತುತೇವೆ ಅನ್ನುತಿದ್ದರು.

‘ಅವರ ಮೋರೆ ನೋಡುವುದಕ್ಕೆ ಕಂಡರೆ ಕೊಲ್ಲದೆ ಬಿಡುವುದಿಲ್ಲ’, ಅನ್ನುವ ಸಂದೇಶ ಕಳಿಸಿದ್ದರು.

ಹೀಗೆ ನೆಲ ಮಾಯವಾಗುತಿತ್ತು ನಮ್ಮ ಪಾಲಿಗೆ. ಕೊನೆ ಕೊನೆಗೆ ನಮ್ಮಲ್ಲಿ ಸತ್ತವರನ್ನು ಹೂಳುವುದಕ್ಕೂ ನೆಲವಿಲ್ಲದಂತೆ ಆಗಿತ್ತು. ಹಾಗಾಗಿ ಗುಂಪಿನಿಂದ ಹೊರಬಂದವರು ನಾವು ಒಬೊಬರೇ ಒಂದೊಂದು ದಿಕ್ಕಿಗೆ, ಅವರವರ ದಾರಿ ಅವರವರು ಹಿಡಿದು ಚೆದುರಿ ಹೋದೆವು.
* * *

ಪೆದ್ರೊ ಝಮೋರನ ಜೊತೆಯಲ್ಲಿ ಐದು ವರ್ಷ ಕಳೆದೆ ನಾನು. ಒಳ್ಳೆಯ ದಿನ, ಕೆಟ್ಟ ದಿನ ಎಲ್ಲಾ ಸೇರಿ ಐದು ವರ್ಷ. ಆಮೇಲೆ ನಾನು ಅವನನ್ನು ನೋಡಲೇ ಇಲ್ಲ. ಅವನು ಯಾರೋ ಹೆಂಗಸಿನ ಬೆನ್ನು ಹತ್ತಿ ಮೆಕ್ಸಿಕೋ ನಗರಕ್ಕೆ ಹೋದ, ಅಲ್ಲೇ ಎಲ್ಲೋ ಅವನ ಕೊಲೆ ಆಯಿತು ಅಂದರು ಜನ. ನಾವು ಕೆಲವರು ಅವನು ವಾಪಸ್ಸು ಬರಲಿ ಎಂದು ಕಾಯುತಿದ್ದೆವು. ಅವನು ಯಾವತ್ತಾದರೂ ಬಂದಾನು, ನಾವು ಮತ್ತೆ ಶಸ್ತ್ರ ಹಿಡಿದು ಹೋರಾಡಬಹುದು ಅಂತ ಕಾಯುತಿದ್ದೆವು. ಕಾದು ಕಾದು ದಣಿದೆವು. ಅವನು ಇನ್ನೂ ಬಂದಿಲ್ಲ. ಅವನ ಕೊಲೆಯಾಯಿತು. ಅವನ ಕೊಲೆ ಆಯಿತು ಅಂತ ಜೈಲಿನಲ್ಲಿ ನನ್ನ ಜೊತೆಯಲ್ಲಿದ್ದವನು ಹೇಳಿದ.

ನಾನು ಜೈಲಿನಿಂದ ಬಂದು ಮೂರು ವರ್ಷವಾಯಿತು. ಯಾವು ಯಾವುದೋ ಅಪರಾಧಗಳಿಗೆ ನನಗೆ ಶಿಕ್ಷೆಯಾಗಿತ್ತು; ಪೆದ್ರೊ ಝಮೋರನ ಜೊತೆಯಲ್ಲಿದ್ದೆ ಅನ್ನುವ ಕಾರಣಕ್ಕೆ ಅಲ್ಲ. ಆ ವಿಷಯ ಅವರಿಗೆ ಗೊತ್ತಿರಲಿಲ್ಲ. ಬೇರೆ ತಪ್ಪುಗಳನ್ನು ಹುಡುಕಿ ಶಿಕ್ಷೆ ಕೊಟ್ಟರು. ಹುಡುಗಿಯರನ್ನು ಅಪಹರಣ ಮಾಡುವ ಕೆಟ್ಟ ಅಭ್ಯಾಸವೂ ಅದರಲ್ಲಿ ಒಂದು. ಹಾಗೆ ಕದ್ದ ಹುಡುಗಿಯರಲ್ಲಿ ಒಬ್ಬಳು ಈಗ ನನ್ನ ಜೊತೆ ಇದ್ದಾಳೆ. ಜಗತ್ತಿನ ಅತಿ ಸುಂದರ, ಅತಿ ಒಳ್ಳೆಯ ಹುಡುಗಿ. ಅಲ್ಲೇ ಜೈಲಿನ ಹೊರಗೇ ಇದ್ದಳು. ನನ್ನ ಬಿಡುಗಡೆಗೆ ಕಾಯುತ್ತಾ ಇದ್ದಳು. ಎಷ್ಟು ದಿನದಿಂದಲೋ ಯಾರಿಗೆ ಗೊತ್ತು.

ಮೊದಲು ನನಗನ್ನಿಸಿದ್ದು ನನ್ನ ಕೊಲ್ಲುವುದಕ್ಕೇ ಕಾಯುತಿದ್ದಾಳೆ ಅಂತ. ಅವಳು ಯಾರು ಅನ್ನುವುದು ಯಾವತ್ತೋ ಕಂಡ ಕನಸಿನ ಹಾಗೆ ಅಸ್ಪಷ್ಟವಾಗಿ ನೆನಪಿಗೆ ಬಂತು. ನಾವು ಟೆಲ್ಕಾಂಪನಾಗೆ ನುಗ್ಗಿ ನಾಶಮಾಡಿದ ರಾತ್ರಿ, ಅವತ್ತು ಬೀಸುತಿದ್ದ ಬಿರುಗಾಳಿ, ಸುರಿಯುತಿದ್ದ ಮಳೆ ನೆನಪಾಯಿತು. ನಾವು ವಾಪಸ್ಸು ಹೊರಟಾಗ ಕೊಂದ ಮುದುಕ ಇವಳ ಅಪ್ಪ, ಖಂಡಿತ ಅನ್ನಿಸಿತು. ಅವನ ಮಗಳನ್ನು ನನ್ನ ಕುದುರೆಯ ಮೇಲೆ ಬಲವಂತವಾಗಿ ಏರಿಸಿಕೊಳ್ಳುತಿದ್ದಾಗ, ಚೀರಾಡುವುದನ್ನು ನಿಲ್ಲಿಸಲಿ, ಕಚ್ಚುವುದನ್ನು ಬಿಡಲಿ ಅಂತ ಅವಳಿಗೆ ಚೆನ್ನಾಗಿ ಬಾರಿಸುತಿದ್ದಾಗ ನಮ್ಮಲ್ಲಿ ಯಾರೋ ಅವನ ತಲೆಗೆ ಗುಂಡು ಹಾರಿಸಿದ್ದರು. ಅಂದಾಜು ಹದಿನಾಲ್ಕು ವರ್ಷದ ಹುಡುಗಿ. ಚಂದದ ಕಣ್ಣಿದ್ದವು. ತುಂಬ ಕಷ್ಟಕೊಟ್ಟಳು ಅವಳನ್ನು ಪಳಗಿಸುವಾಗ.

‘ನಿನ್ನ ಮಗನನ್ನು ಹೆತ್ತಿದ್ದೇನೆ, ಇಗೋ ನೋಡು’. ಅಂದಳು.

ಅಂಜಿದ ಕಣ್ಣಿನ ಇಷ್ಟೆತ್ತರ ಹುಡುಗನನ್ನು ತೋರಿಸಿದಳು.

‘ನಿನ್ನ ಹ್ಯಾಟು ತೆಗಿ, ಅಪ್ಪ ನಿನ್ನ ಮುಖಿ ನೋಡಲಿ’, ಅಂದಳು.

ಹುಡುಗ ಹ್ಯಾಟು ತೆಗೆದ. ಥೇಟು ನನ್ನ ಹಾಗೇ ಕಂಡ. ಅವನ ಕಣ್ಣಲ್ಲಿ ಒಂದಿಷ್ಟು ಕೆಡುಕು ಕೂಡಾ ಇತ್ತು. ಅಪ್ಪನಿಂದ ಬಂದ ಗುಣವಿರಬೇಕು ಅದು.

‘ಇವನ ಹೆಸರು ಕೂಡ ಎಲ್ ಪಿಚಾನ್. ಆದರೆ ಇವನ ಕಳ್ಳ ಅಲ್ಲ. ದರೋಡೆಕೋರ ಅಲ್ಲ, ಕೊಲೆಗಾರನೂ ಅಲ್ಲ. ಒಳ್ಳಯವನು’, ಅಂದಳು.

ತಲೆ ತಗ್ಗಿಸಿದೆ.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : El llano en llamas The Burning Plain

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿರಾಳ
Next post ಸಣ್ಣತನವ ನೀಗಿ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys